ಜೈ಼ಗೋಫಿಲೇಸೀ ಕುಟುಂಬಕ್ಕೆ ಸೇರಿದ ಒಂದು ಮರ. ಗ್ವೈಯಕಮ್ ಅಫಿಸಿನೇಲ್ ಇದರ ವ್ಶೆಜ್ಞಾನಿಕ  ಹೆಸರು. ಇದು ಮೂಲತಃ ಕರಿಬಿಯನ್ ಮತ್ತು ದಕ್ಷಿಣ ಅಮೆರಿಕದ ಉಷ್ಣವಲಯದ್ದು. ಭಾರತದಲ್ಲಿ ಇದನ್ನು ತೋಟಗಳಲ್ಲಿ ಬೆಳೆಸುವುದುಂಟು. ಇದು ಸುಮಾರು 6-15ಮೀ. ಎತ್ತರಕ್ಕೆ ಬೆಳೆಯುವ ನಿತ್ಯಹಸಿರಿನ ಮರ. ಡೊಂಕುಡೊಂಕಾದ ಮುಖ್ಯಕಾಂಡ, ಗಂಟುಗಳುಳ್ಳ ರೆಂಬೆಗಳು, ಹಸಿರು ಮತ್ತು ಊದಾ ಬಣ್ಣದ ಮಚ್ಚೆಗಳಿರುವ ನುಣುಪಾದ ಹಾಗೂ ಬೂದಿಬಣ್ಣದ ತೊಗಟೆ, ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿರುವ ಸಂಯುಕ್ತ ಎಲೆಗಳು, ಎಲೆಗಳ ಬುಡದಲ್ಲಿ ಕಿತ್ತಳೆ ಬಣ್ಣದ ಚುಕ್ಕೆ ಇರುವುದು, ರಂಬೆಗಳ  ತುದಿಗಳಲ್ಲಿನ ಗೊಂಚಲುಗಳಲ್ಲಿ ಸಮಾವೇಶಗೊಂಡಿರುವ ನೀಲಿ ಬಣ್ಣದ ಹೂಗಳು, ಚಿಕ್ಕಗಾತ್ರದ ಮತ್ತು ಹಳದಿ ಇಲ್ಲವೆ ಕಿತ್ತಳೆ ಬಣ್ಣದ ಬೆರಿ ಮಾದರಿಯ ಹಣ್ಣುಗಳು - ಇವು ಗ್ವೈಯಕಮ್ ಮರದ ಮುಖ್ಯ ಲಕ್ಷಣಗಳು. ಇದರ ಚೌಬೀನೆಗೆ ಲಿಗ್ನಮ್ ವೈಟೇ ಎಂಬ ವಾಣಿಜ್ಯ ನಾಮವಿದೆ. ಮರದ ಚೇಗುಭಾಗ ಹಸಿರುಮಿಶ್ರಿತ ಕಂದು ಇಲ್ಲವೆ ಕಪ್ಪುಬಣ್ಣದ್ದು. ಇದಕ್ಕೆ ಒಂದು ರೀತಿಯ ಹುಳಿವಾಸನೆ ಹಾಗು ಕಹಿರುಚಿ ಇದೆ. ರಸಕಾಷ್ಠ ಹಳದಿ ಬಣ್ಣದ್ದು. ಚೌಬೀನೆ ಬಲುಗಟ್ಟಿ, ರಾಳಮಯ ಮತ್ತು ಇದರಲ್ಲಿನ ಎಳೆಗಳು ಓರೆಮಾದರಿಯಲ್ಲಿ ಜೋಡಣೆಗೊಂಡಿವೆ. ಆದ್ದರಿಂದ ಇದನ್ನು ಸೀಳುವುದಾಗಲಿ ಇದರಿಂದ ಮರಗೆಲಸ ಮಾಡುವುದಾಗಲಿ ಸಾಧ್ಯವಿಲ್ಲ. ಆದರೆ ಇದು ಅತ್ಯಂತ ಭಾರವಾದ ಮತ್ತು ಗಟ್ಟಿಯಾದ ಚೌಬೀನೆಗಳಲ್ಲೊಂದು. ಹೀಗಾಗಿ ರಾಟೆ, ಕೊರೆಯಚ್ಚು ಮತ್ತು ಉಳಿಕೊರಡುಗಳು, ಕುಂಚದ ಹಿಡಿಗಳು, ಒನಕೆ, ಸ್ಕಿಟಲ್ ಚೆಂಡುಗಳು, ಉರುಳುಯಂತ್ರ, ರೇಚಕಯಂತ್ರ ಮುಂತಾದವುಗಳ ಘರ್ಷಣ ಭಾಗಗಳು-ಇವೇ ಮೊದಲಾದವನ್ನು ತಯಾರಿಸಲು ಇದನ್ನು ಬಳಸುತ್ತಾರೆ. ಇದು ಉಪ್ಪುನೀರಿನಿಂದ ಹಾಳಾಗುವುದಿಲ್ಲವಾದ್ದರಿಂದ ಹಡಗುಗಳ ಚಾಲಕದ ಅಲಗು ಮುಂತಾದವುಗಳನ್ನು ತಯಾರಿಸಲು ಇದನ್ನು ಉಪಯೋಗಿಸುವುದುಂಟು. ಗ್ವೈಯಕಮ್ ಮರದ ರಾಳಕ್ಕೆ ಗ್ವೈಯಕಮ್ ಗೋಂದು ಇಲ್ಲವೆ ಗೈವಯಕ್ ರಾಳ ಎಂದು ಹೆಸರು. ಮರದಿಂದ ಸ್ವಾಭಾವಿಕವಾಗಿಯೇ ಒಸರುವ ಇದನ್ನು ನೇರವಾಗಿ ಸಂಗ್ರಹಿಸಬಹುದು. ಹೆಚ್ಚು ಮೊತ್ತದಲ್ಲಿ ಬೇಕಾದಾಗ ಮರದ ದಿಮ್ಮಿಗಳ ಮೇಲೆ ಅಲ್ಲಲ್ಲಿ ಕಚ್ಚುಮಾಡಿ ಅವುಗಳ ಒಂದು ತುದಿಗೆ ಬೆಂಕಿ ಹಚ್ಚಿ ರಾಳ ಹೊರಬರುವಂತೆ ಮಾಡಿಯೊ ಇಲ್ಲವೆ ಮರವನ್ನು ಚಕ್ಕೆ ಇಲ್ಲವೆ ಪುಡಿಯನ್ನಾಗಿ ಮಾಡಿ ಉಪ್ಪುನೀರಿನಲ್ಲಿ ಕುದಿಸಿ ರಾಳ ತೇಲುವಂತೆ ಮಾಡಿಯೊ ಸಂಗ್ರಹಿಸುವುದುಂಟು. ಆಗತಾನೇ ಸ್ರವಿಸಿದ ರಾಳ ಕಂದು ಇಲ್ಲವೆ ಕಪ್ಪು ಮಿಶ್ರಿತ ಕಂದು ಬಣ್ಣದ್ದು. ಗಾಳಿಗೆ ಕೊಂಚಕಾಲ ಒಡ್ಡಿದರೆ ಹಸಿರು ಬಣ್ಣವನ್ನು ತಳೆಯುವುದಲ್ಲದೆ ಪಾರದೀಪಕವಾದ (ಟ್ರಾನ್ಸ್ಲ್ಯೂಸೆಂಟ್) ಗಾಜಿನಂಥ ಹರಳುಗಳ ರೂಪಕ್ಕೆ ತಿರುಗುತ್ತದೆ. ಆಲ್ಕೊಹಾಲ್, ಈಥರ್, ಕ್ಲೋರೋಫಾರಮುಗಳಲ್ಲಿ ಕರಗುತ್ತದೆ. ಇದಕ್ಕೆ ಒಂದು ಬಗೆಯ ಕಡುರುಚಿ ಉಂಟು. ತಿಂದರೆ ಗಂಟಲುರಿ ಉಂಟಾಗುತ್ತದೆ. ಹಂದಿಯ ಕೊಬ್ಬು (ಲಾರ್ಡ್) ಮತ್ತು ನಿರ್ಜಲೀಕರಿಸಿದ ಆಹಾರವಸ್ತುಗಳು ಕೆಡದೆ ಹಲವು ಕಾಲ ಇರುವಂತೆ ಮಾಡಲು ಗ್ವೈಯಕ್ ರಾಳವನ್ನು ಬಳಸುತ್ತಾರೆ. ಅಲ್ಲದೆ ಕೀಲುವಾತ, ಗಂಟಲ ಉರಿಯೂತ, ಟಾನ್ಸಿಲೈಟಿಸ್ ಮುಂತಾದ ರೋಗಗಳ ನಿವಾರಣೆಗೂ ಲಘುವಿರೇಚಕವಾಗಿಯೂ ಇದನ್ನು ಉಪಯೋಗಿಸುವುದುಂಟು. ಮೂತ್ರ ಮುಂತಾದವುಗಳಲ್ಲಿ ರಕ್ತ ಇಲ್ಲವೆ ಹಿಮೊಗ್ಲಾಬಿನ್  ಇರವನ್ನು ಪತ್ತೆ ಹಚ್ಚಲು ಗ್ವೈಯಕಮ್ ಟಿಂಕ್ಚರನ್ನು ಬಳಸುತ್ತಿದ್ದರು.			        (ಎಚ್.ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ